ಬಾಳಿಕೆ ಪರೀಕ್ಷಣೆ

ವಸ್ತುವಿನ ವಿಶ್ವಾಸಾರ್ಹತೆಯ ಅಧ್ಯಯನಕ್ಕೆ ಅವಶ್ಯವಾದ ದತ್ತಾಂಶಗಳನ್ನು ಪಡೆಯುವ ವಿಧಾನ (ಲೈಫ್ ಟೆಸ್ಟಿಂಗ್).  ಯಾವುದೇ ವಸ್ತು (ಯಂತ್ರೋಪಕರಣ ಅಥವ ಬಿಡಿಭಾಗ) ನಿರ್ದಿಷ್ಟ ಅವಧಿಯಲ್ಲಿ ಉದ್ದೇಶಿತ ಕಾರ್ಯವನ್ನು ತೃಪ್ತಿಕರವಾಗಿ ನಿರ್ವಹಿಸುವುದರ ಸಂಭಾವ್ಯತೆಯೇ ಅದರ ವಿಶ್ವಾಸಾರ್ಹತೆ.  ಈ ಅಧ್ಯಯನದಲ್ಲಿ ವಸ್ತುವಿನ ಬಾಳಿಕೆ ಅವಧಿಯನ್ನು ಒಂದು ಯಾದೃಚ್ಛಿಕ ಚರವಾಗಿ ಪರಿಗಣಿಸಿ ಯುಕ್ತ ಹಾಗೂ ಸಂಭಾವ್ಯತಾ ಪ್ರತಿರೂಪವನ್ನು ಬಳಸಲಾಗುವುದು.  ಚರಘಾತೀಯ, ವೈಬುಲ್ ಹಾಗೂ ಗ್ಯಾಮ ಸಂಭಾವ್ಯತಾ ವಿತರಣೆಗಳು ಕೆಲವು ಉದಾಹರಣೆಗಳು.  ಈ ಪ್ರತಿರೂಪಗಳಲ್ಲಿಯ ಪ್ರಾಚಲಗಳು ವಿಶ್ವಾಸಾರ್ಹತೆಯ ಬಗ್ಗೆ ಮಾಹಿತಿ ಕೊಡುವುದರಿಂದ ಅವುಗಳ ಬಗೆಗೆ ಹೆಚ್ಚು ತಿಳಿಯಲು ದತ್ತಾಂಶ ಅವಶ್ಯ.  ಇದಕ್ಕಾಗಿ ಪ್ರತಿಚಯವೊಂದನ್ನು ಪರೀಕ್ಷೆಗೆ ಒಳಪಡಿಸಿ ಅದರಲ್ಲಿರುವ ವಸ್ತುಗಳು ಬಾಳಿದ ಅವಧಿ ಮುಂತಾದ ದತ್ತಾಂಶಗಳನ್ನು ಸಂಗ್ರಹಿಸಲಾಗುವುದು.  ಇದು ಬಾಳಿಕೆ ಪರೀಕ್ಷಣೆ.  ಇದರಿಂದ ಪಡೆದ ದತ್ತಾಂಶಗಳನ್ನು ಬಳಸಿ ಪ್ರಾಚಲ ಅಥವಾ ವಿಶ್ವಾಸಾರ್ಹತೆಯ ಬಿಂದು ಅಂದಾಜು, ಭರವಸೆ ಮಧ್ಯಾಂತರಗಳನ್ನು ಗಣಿಸಬಹುದು ಮತ್ತು ಪ್ರಾಚಲಗಳಿಗೆ ಸಂಬಂಧಿಸಿದ ಆಧಾರ ಭಾವನೆಗಳನ್ನು ಪರೀಕ್ಷಿಸಬಹುದು.

ಬಾಳಿಕೆ ಪರೀಕ್ಷಣೆಯಲ್ಲಿ ಪ್ರತಿಚಯದಲ್ಲಿಯ ಎಲ್ಲ ವಸ್ತುಗಳೂ ವಿಫಲವಾಗುವವರೆಗೆ ಪ್ರಯೋಗವನ್ನು ಅವಲೋಕಿಸಬಹುದು.  ಪ್ರಯೋಗಕ್ಕೆ ತಗಲುವ ಖರ್ಚು ಮತ್ತು ಅದು ತೆಗೆದುಕೊಳ್ಳುವ ಅವಧಿ ನಿಯಮಿತವಾಗಿದ್ದರೆ ಇಂಥ ಪರೀಕ್ಷೆ ಅಪ್ರಾಯೋಗಿಕ.  ಈ ಸಂದರ್ಭಗಳಲ್ಲಿ ಸೆನ್ಸರಿಂಗ್ ಮಾಡಬಹುದು.  ಪ್ರತಿಚಯದಲ್ಲಿಯ ಎಲ್ಲ ವಸ್ತುಗಳೂ ವಿಫಲವಾಗುವ ಮೊದಲೇ ಒಂದು ನಿರ್ದಿಷ್ಟ ಅವಧಿಯ ತನಕ ಮಾತ್ರ ಅವಲೋಕಿಸಿ ಪರೀಕ್ಷಣೆಯನ್ನು ಮೊಟಕುಗೊಳಿಸುವುದು ಒಂದನೆಯ ವಿಧದ ಸೆನ್ಸರಿಂಗ್.  ಎರಡನೆಯ ವಿಧದ ಸೆನ್ಸರಿಂಗಿನಲ್ಲಿ ಇಂತಿಷ್ಟು ಎಂದು ನಿಗದಿಪಡಿಸಿದ ವೈಫಲ್ಯಗಳವರೆಗೆ ಮಾತ್ರ ಅವಲೋಕಿಸಲಾಗುವುದು.  ಈ ಎರಡು ಸೆನ್ಸರಿಂಗ್ ವಿಧಾನಗಳಲ್ಲದೆ ಪ್ರಯೋಗದ ಉದ್ದಕ್ಕೂ ವಸ್ತುಗಳನ್ನು ಬಾಳಿಕೆ ಪರೀಕ್ಷಣೆಯಿಂದ ಅವು ವಿಫಲವಾಗುವ ಮೊದಲೇ ತೆಗೆದು ಸೆನ್ಸರ್ ಮಾಡಬಹುದು.  ಇದು ಅನುಕ್ರಮಿತ ಸೆನ್ಸರಿಂಗ್.  

ಮೇಲೆ ವಿವರಿಸಿದ ಬಾಳಿಕೆ ಪರೀಕ್ಷಣೆಯಲ್ಲಿ ವಸ್ತು ನಮೂನೆಗಳನ್ನು ಅವು ಕಾರ್ಯನಿರ್ವಹಿಸಬೇಕಾಗಿರುವ ನೈಜ ಪರಿಸರವನ್ನು ಆದಷ್ಟು ಯಥಾವತ್ ಇರುವಂತೆ ಸೃಷ್ಟಿಸಿ ಪರೀಕ್ಷಿಸಲಾಗುವುದು. ಇದು ಸಾಧ್ಯವಿಲ್ಲದಿದ್ದರೆ ತ್ವರಿತಗೊಳಿಸಿದ ಬಾಳಿಕೆ ಪರೀಕ್ಷಣೆ ನಡೆಸಬಹುದು.  ವಸ್ತುವಿನ ವಿಶ್ವಾಸಾರ್ಹತೆ ಹೆಚ್ಚಿದಂತೆಲ್ಲ ಇದನ್ನು ಅಳೆಯುವುದು ಕಷ್ಟವಾಗುತ್ತದೆ.  ಇದಕ್ಕಾಗಿ ಅಧಿಕ ದತ್ತಾಂಶ ಅಗತ್ಯ.  ಅಲ್ಲದೆ, ವಿಶ್ವಾಸಾರ್ಹತೆ ಗಳಿಸುವಷ್ಟರಲ್ಲಿ ವಸ್ತುವಿನ ಬೇಡಿಕೆ ಇಳಿಯಬಹುದು.  ಹೀಗಾಗಿ ತ್ವರಿತಗೊಳಿಸಿದ ಬಾಳಿಕೆ ಪರೀಕ್ಷಣೆ ಅಗತ್ಯ.  ವಸ್ತುವೊಂದನ್ನು ಅದು ಮುಂದೆ ಎದುರಿಸಬೇಕಾಗುವುದಕ್ಕಿಂತಲೂ ಅಧಿಕ ಒತ್ತಡ ಮತ್ತು ಕಷ್ಟವಿರುವ ಪರೀಕ್ಷೆಗೆ ಒಳಪಡಿಸುವುದು ತ್ವರಿತಗೊಳಿಸಿದ ಬಾಳಿಕೆ ಪರೀಕ್ಷಣೆ.  ಇದನ್ನು ಆಧರಿಸಿದ ವಿಶ್ಲೇಷಣೆ ಸುಲಭವಲ್ಲ. 

ಚಿತ್ರ-1

ಬಾಳಿಕೆ ಅವಧಿ ಒಂದು ಯಾದೃಚ್ಭಿಕ ಚರವೆಂದು ಹೇಳಿದೆಯಷ್ಟೆ.. ಇದಕ್ಕೆ ಯುಕ್ತ ಸಂಭಾವ್ಯತಾ ವಿತರಣೆ ಹೊಂದಿಸುವಾಗ ವೈಫಲ್ಯ ಮತ್ತು ಅಪಾಯ ದರಗಳನ್ನು ಗಮನಿಸಬೇಕು.  ಕಾಲ ಅನುಸರಿಸಿ ವೈಫಲ್ಯದರದಲ್ಲಾಗುವ ಏರಿಳಿತಗಳನ್ನು ಮೂರು ಸ್ತರಗಳಲ್ಲಿ ಗುರುತಿಸಬಹುದು.  ಆರಂಭದಲ್ಲಿ ವೈಫಲ್ಯದರ ಹೆಚ್ಚಿದ್ದು (ಉದಾಹರಣೆಗೆ ಹೆಚ್ಚು ಶಿಶುಮರಣಗಳಿಂದಾಗಿ) ಅನಂತರ ಸ್ವಲ್ಪಕಾಲದ ತನಕ ನಿಶ್ಛಲವಾಗಿರುತ್ತದೆ.  ಆಗ ಸಾಧಾರಣವಾಗಿ ಯಾದೃಚ್ಭಿಕ ವೈಫಲ್ಯಗಳು ಮಾತ್ರ ಸಾಧ್ಯ.  ಅನಂತರ ವೈಫಲ್ಯದರ ಹೆಚ್ಚುತ್ತ ಹೋಗುತ್ತದೆ.  ಇದಕ್ಕೆ ವಸ್ತುಗಳ ಕಾರ್ಯನಿರ್ವಹಣಾವಧಿ ಹೆಚ್ಚಾದಂತೆಲ್ಲ ಸತತ ಬಳಕೆಯಿಂದ ಅವುಗಳ ವೈಫಲ್ಯ ಜಾಸ್ತಿಯಾಗುವುದು ಕಾರಣ.  ಈ ವಿಧದ ವೈಫಲ್ಯಗಳಿಗೆ ಸವೆದುಹೋದ (ವೇರ್ ಔಟ್) ವೈಫಲ್ಯ ಎಂದು ಹೆಸರು.  ಸಾಮಾನ್ಯವಾಗಿ ವೈಫಲ್ಯ ದರದ ವಕ್ರರೇಖೆ ಸ್ನಾನದ ತೊಟ್ಟಿಯ ಆಕಾರದಲ್ಲಿರುತ್ತದೆ.  ವೈಫಲ್ಯದರ ವಕ್ರರೇಖೆಯ ಆಕಾರ ಬಾಳಿಕೆ ಅವಧಿಯ ಸಂಭಾವ್ಯತಾ ವಿತರಣೆಯನ್ನು ನಿರ್ಧರಿಸುವಲ್ಲಿ ಸಹಾಯಕವಾಗುತ್ತದೆ.  ಉದಾಹರಣೆಗೆ ಚರಘಾತೀಯ ಸಂಭಾವ್ಯತಾ ವಿತರಣೆಗೆ ಸಂಬಂಧಿಸಿದ ವೈಫಲ್ಯದರ ವಕ್ರರೇಖೆ ಕಾಲದ ಅಕ್ಷಕ್ಕೆ ಸಮಾಂತರವಾದ ಸರಳರೇಖೆ.  

	ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ ಮುಂತಾದ ಕೈಗಾರಿಕಾ ಕ್ಷೇತ್ರಗಳು ಮತ್ತು ಸಂಶೋಧನಾ ವಿಭಾಗಗಳಲ್ಲಿ ಹಾಗೂ ಯಂತ್ರೋಪಕರಣಗಳ ಮತ್ತು ಬಿಡಿಭಾಗಗಳ ಉತ್ಪಾದನೆಯಲ್ಲಿ ಬಾಳಿಕೆ ಪರೀಕ್ಷಣೆಯ ಆವಶ್ಯಕತೆ ಮತ್ತು ಉಪಯೋಗ ಬಲು ಹೆಚ್ಚು.               											(ಎಸ್.ಎಂ.ಎಂಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ